ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

#MeToo : ಶ್ರುತಿ ಮಾತು ಕೇಳಿಸಿಕೊಳ್ಳಲೂ ಕಷ್ಟವೇಕೆ?

Last Updated 26 ಅಕ್ಟೋಬರ್ 2018, 20:15 IST
ಅಕ್ಷರ ಗಾತ್ರ

ಶ್ರುತಿ ಹರಿಹರನ್ ವೈಯಕ್ತಿಕವಾಗಿ ನನಗೆ ಗೊತ್ತಿಲ್ಲ. ಆದರೆ ಭರವಸೆಯ ಯುವ ನಟಿ ಎಂದಷ್ಟೇ ಗೊತ್ತು. ಅರ್ಜುನ್ ಸರ್ಜಾ ಸಹ ವೈಯಕ್ತಿಕವಾಗಿ ಗೊತ್ತಿಲ್ಲ. ಅವರ ಚಿತ್ರಗಳನ್ನು ನೋಡಿದ್ದೇನೆ. ಇಷ್ಟವಾಗುವ ಸಭ್ಯ ವ್ಯಕ್ತಿಯಂತೆ ಕಂಡುಬರುತ್ತಾರೆ. ಹೀಗಿದ್ದೂ ಶ್ರುತಿ ಮಾತು ಸರಿಯಲ್ಲ ಎಂದು ಅವರು ಹೇಳಿದರೆ ಆ ಕುರಿತು ನ್ಯಾಯಾಧೀಶರಂತೆ ತೀರ್ಮಾನ ತೆಗೆದುಕೊಳ್ಳಲು ನಾನು ಯಾರು? ಯಾರು ಹೀರೋ ಅಥವಾ ಯಾರು ವಿಲನ್ ಎಂಬುದು ನಮಗೆ ಮೊದಲೇ ಗೊತ್ತಿದೆ ಎನ್ನಲು ಬದುಕೇನು ಬಾಲಿವುಡ್ ಅಥವಾ ಸ್ಯಾಂಡಲ್‍ವುಡ್ ಸಿನಿಮಾನೇ?

ನಿಜ ಜೀವನದಲ್ಲಿ ಸರ್ಜಾ ಚಾರಿತ್ರ್ಯಕ್ಕೆ ಮಸಿ ಬಳಿಯುವ ಉದ್ದೇಶ ಇಲ್ಲಿಲ್ಲ. ಆದರೆ ಮಹಿಳೆಯೊಬ್ಬಳು ಮಾತನಾಡಿದ್ದನ್ನು ಕೇಳಿಸಿಕೊಳ್ಳಲು ಹಾಗೂ ಕಾನೂನು ವ್ಯವಸ್ಥೆ ಕಾರ್ಯನಿರ್ವಹಿಸುವಂತೆ ಸುಮ್ಮನೇ ಬಿಡಲು ನಮಗೆ ಯಾಕೆ ಇಷ್ಟು ಕಷ್ಟ?

ಇಷ್ಟು ವರ್ಷ ಒಟ್ಟಾಗಿ ಕೆಲಸ ಮಾಡಿದಾಗ ನಮ್ಮ ಜೊತೆ ಚೆನ್ನಾಗಿ ನಡೆದುಕೊಂಡಿದ್ದ, ಮಹಿಳೆಯ ಜೊತೆ ಆತ ಅನುಚಿತವಾಗಿ ವರ್ತಿಸುವುದೇ ಇಲ್ಲ ಎಂಬಂತಹ ಮಾತುಗಳನ್ನು ಬೇರೆ ಆಡಲಾಗುತ್ತಿದೆ. ಆದರೆ ಪ್ರತಿಯೊಂದು ಅನುಭವವೂ ವೈಯಕ್ತಿಕವಾದದ್ದು ಮತ್ತು ವಿಶಿಷ್ಟವಾದದ್ದು. ಹೀಗಾಗಿ ಅನುಚಿತ ವರ್ತನೆ ತೋರಿದ ವ್ಯಕ್ತಿಯ ಹೆಸರು ಹೇಳಿದಂತಹ ಪ್ರತೀ ಮಹಿಳೆಯ ಮಾತುಗಳನ್ನು ಕುಬ್ಜವಾಗಿಸುವುದು ಎಷ್ಟು ಸರಿ? ಕಪ್ಪು– ಬಿಳುಪು ಎಂದು ಸರಳೀಕೃತ ನೆಲೆಯಲ್ಲಿ ನ್ಯಾಯ ನಿರ್ಣಯ ಮಾಡಲಾಗದು. ಎಲ್ಲಾ ಮಹಿಳೆಯರೂ ಒಳ್ಳೆಯವರು ಅಥವಾ ಎಲ್ಲಾ ಪುರುಷರೂ ಕೆಟ್ಟವರು ಎಂದೂ ನಾವು ಹೇಳುತ್ತಿಲ್ಲ.

ಮಹಿಳೆಯ ದನಿಯನ್ನು ಸಾರಾಸಗಟಾಗಿ ತಳ್ಳಿಹಾಕುತ್ತಿಲ್ಲ. ನಾವು ಖಂಡಿತ ಕೇಳಿಸಿಕೊಳ್ಳುತ್ತೇವೆ ಎಂಬುದನ್ನು ಪ್ರದರ್ಶಿಸಲು ಜಗ್ಗೇಶ್, ತಾರಾ, ಅಂಬರೀಷ್‌ರಂತಹ ದಿಗ್ಗಜರನ್ನು ಒಳಗೊಂಡ ನಮ್ಮ ಪ್ರೀತಿಯ ಕನ್ನಡ ಚಿತ್ರರಂಗಕ್ಕೆ ಇದೊಂದು ಅವಕಾಶ.

-ವಾಸಂತಿ ಹರಿಪ್ರಕಾಶ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT